Monday, September 17, 2012

 
ವಿಶ್ವೇಶ್ವರಯ್ಯ  ಶ್ರಮ  ಪಡದಿದ್ದರೆ ...!!
(ಮೇರು ವ್ಯಕ್ತಿತ್ವದ ತಂತ್ರಜ್ಞನಿಗೆ ಇಂಜಿನಿಯರ್ ದಿನಚರಣೆ (ಸೆ.೧೫) ಆಚರಿಸುವ ಈ ಸಂದರ್ಭದಲ್ಲಿ ಸಣ್ಣ ನುಡಿ ನಮನ)

ಹಲವು ದಶಕಗಳ ಹಿಂದಿನ ಮಾತು, ಭಾರತೀಯ ಎಂಜಿನಿಯರ್ಗಳ ತಂಡವೊಂದು ಅಮೇರಿಕಾದ ಕಾರ್ಖಾನೆಗಳ ಅಧ್ಯಯನ ಪ್ರವಾಸದಲ್ಲಿತ್ತು. ತಂಡದ ಸದಸ್ಯರು ಬೃಹತ್ ಕಾರ್ಖಾನೆಯೊಂದರ ನೆಲ ಮಾಳಿಗೆಯ ಬಳಿಯ 50-60 ಅಡಿ ಎತ್ತರದ ಏಣಿಯೊಂದರ ಬಳಿ ನಿಂತಿದ್ದರು. ತಂಡಕ್ಕೆ ಅಮೇರಿಕನ್ ಇಂಜಿನಿಯರ್ ಒರ್ವ ಕಾರ್ಖಾನೆಯ ಉತ್ಪಾದನಾ ಸಾರ್ಮಥ್ಯ ಹಾಗೂ ಯಂತ್ರಗಳ ಬಗ್ಗೆ ಮಾಹಿತಿ ನೀಡಿ ಬೃಹತ್ ಯಂತ್ರಗಳು ಕಾರ್ಯನಿರ್ವಹಿಸುವ ವಿಧಾನ ತಿಳಿಯುವ ಆಸಕ್ತಿ ಇದ್ದರೆ ಹತ್ತಿರದಲ್ಲೇ ಇರುವ ದೊಡ್ಡ ಏಣಿಯನ್ನು ಹತ್ತಿ ಮೇಲಿನಿಂದ ವೀಕ್ಷಿಸಬಹುದು ಎಂಬ ಸಲಹೆಯನ್ನು ಕೊಟ್ಟನು. ಕೂಡಲೇ ಭಾರತೀಯ ತಂಡದಲ್ಲಿದ ಹಿರಿಯ ವಯೋವೃದ್ದ ಇಂಜಿನಿಯರ್ ಒಬ್ಬರು ತಡಮಾಡದೇ ಮುಂದೆ ಬಂದು ಏಣಿಯನ್ನು ಒಂದೇ ಉಸಿರಿನಲ್ಲಿ ವಿಶ್ರಮಿಸದೇ ಹತ್ತಿ ಯಂತ್ರಗಳನ್ನು ವೀಕ್ಷಿಸಿ ಪೂರ್ಣ ತಪಾಸಣೆ ಮುಗಿಸಿ ಅಲ್ಲೇ ನಿಂತರು. ತಂಡದ ಇನ್ನುಳಿದ ಕೆಲವು ಸದಸ್ಯರು ಆಶ್ಚರ್ಯಚಕಿತರಾಗಿ ಕೆಳಗೆ ನಿಂತು ನೋಡುತ್ತಿದ್ದರು, ಇನ್ನೂ ಕೆಲವರು ಏಣಿಯನ್ನು ಅರ್ಧಕ್ಕೆ ಹತ್ತಿ ವಿಫಲರಾಗಿ ನಿಂತಿದ್ದರು, ಯುವಕರಾಧಿಯಾಗಿ ತಂಡದ ಎಲ್ಲಾ ಸದಸ್ಯರು ಏಣಿಯನ್ನು ಹತ್ತಲು ವಿಫಲರಾದರೂ, ಹಿರಿಯ ಜೀವವೊಂದು ಯಶಸ್ವಿಯಾಗಿತ್ತು. ವ್ಯಕ್ತಿಯ ರೀತಿಯೇ ಹಾಗೇ ತಾನು ಏನನ್ನು ಮಾಡಿದರು ಅದನ್ನ ವ್ಯವಸ್ಥಿತವಾಗಿ ಅಂದುಕೊಂಡಂತೆ ಮಾಡಿ ತೀರುವ ಮೇಧಾವಿ!

ಮೈಸೂರು ಮಹಾರಾಜರ ಕಾಲವದು, ಸಾಂಪ್ರದಾಯದಂತೆ ಪ್ರತಿ ವರ್ಷ ದಸರಾ ಪ್ರಯುಕ್ತ ಮೈಸೂರು ಮಹಾರಾಜರ ಅರಮನೆಯ ಆಸ್ಥಾನದಲ್ಲಿ ದರ್ಬಾರು ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಬರುತ್ತಿದ್ದ ವಿದೇಶಿ ಅತಿಥಿಗಳಿಗೆ ಆಸ್ಥಾನದಲ್ಲಿ ಕುಳಿತು ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸಲು ವಿಶೇಷ ವೈಭೋವೋಪೇತ ಅಸನಗಳ ವ್ಯವಸ್ಥೆ ಮಾಡಲಾಗುತ್ತಿತ್ತು, ಹಾಗೇ ಉಳಿದ ಭಾರತೀಯ ಗಣ್ಯರು ನೆಲದ ಮೇಲೆ ಕುಳಿತು ಕಾರ್ಯಕ್ರಮದಲ್ಲಿ ಪಾಲ್ಗೊಳಬೇಕಾಗಿತ್ತು. ಮೊದಲ ಬಾರಿ ಆಸ್ಥಾನದ ದಿವಾನರಾಗಿ ನೇಮಕಗೊಂಡಿದ್ದ ದಿವಾನರೊಬ್ಬರು ದರ್ಬಾರು ಕಾರ್ಯಕ್ರಮದ ಅಸನದ ವ್ಯವಸ್ಥೆಯ ತಾರತಮ್ಯವನ್ನು ಗ್ರಹಿಸಿ ಅಸಮಾಧಾನಗೊಂಡು ಮುಂದಿನ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲೇ ಇಲ.್ಲ ಮಹಾರಾಜರು ಇವರ ಅನುಪಸ್ಥಿತಿಯ ಬಗ್ಗೆ ವಿಚಾರಿಸಲು ಯಾವುದೇ ಅಂಜಿಕೆ ಇಲ್ಲದೆ ಕಾರಣವನ್ನು ತಿಳಿಸಿದ ದಿಟ್ಟ ಆಡಳಿತಗಾರ! ಇದರ ಫಲವಾಗಿ ಮುಂದಿನ ವರ್ಷಗಳಲ್ಲಿ ಎಲ್ಲರಿಗೂ ಸಮಾನ ಅಸನ ವ್ಯವಸ್ಥೆಯಾಯಿತು.

ಮುಂದೊಂದು ದಿನ ಬ್ರಿಟೀಷ್ ಅಧಿಕಾರಿಯೊಬ್ಬ ಇದೇ ದಿವಾನರಿಗೆ ಪತ್ರ ಬರೆದು ನಿಮ್ಮ ದರ್ಬಾರಿನಲ್ಲಿರುವ ಅಸನಗಳು ಅತೀ ಎತ್ತರದಾಗಿದ್ದು, ಅದರ ಮೇಲೆ ಕೂತಾಗ ಪಾದಗಳು ನೆಲಕ್ಕೆ ತಾಕುವಂತಿರುವುದರಿಂದ ಪಾದಗಳನ್ನು ಇಡಲು ಮೆತ್ತನೆ ಹಾಸೊಂದನ್ನು ಒದಗಿಸಬೇಕೆಂದು ಬೇಡಿಕೆ ಇಟ್ಟನು. ಮೇಧಾವಿ ದಿವಾನರು ಅಸನದ ಕಾಲುಗಳನ್ನು ಕತ್ತರಿಸಿ ಅಸನದ ಎತ್ತರವನ್ನು ತುಂಡವಾಗಿಸಿ ಬ್ರಿಟೀಷ್ ಅಧಿಕಾರಿಗೆ ಪತ್ರ ಬರೆದುಅಸನ ಸರಿಪಡಿಸಲಾಗಿದೆಎಂದರು. ಅಂತಹ ನಿರ್ಭೀತ ದೇಶ ಭಕ್ತರಾಗಿದ್ದರು ದಿವಾನರು!

ಅಂದ ಹಾಗೇ ಮೇಲಿನ ಸ್ವಾರಸ್ಯಕರ ಘಟನೆಗಳಲ್ಲಿ ಪ್ರಸ್ತಾಪ ಮಾಡಿರುವ ಮೇಧಾವಿ ವೃದ್ದ ಇಂಜಿನಿಯರ್, ದಕ್ಷ ಆಡಳಿತಗಾರ ದಿವಾನರು ಬೇರೆ ಯಾರು ಅಲ್ಲ, ಅವರೇ ನಮ್ಮ ಭವ್ಯ ಭಾರತದ ದಿವ್ಯ ಕೀರ್ತಿ ಪತಾಕೆಯನ್ನು ಜಗತ್ತಿನಲ್ಲೆಡೇ ಮೇಲ್ಮಟದಲ್ಲಿ ಹಾರುವಂತೆ ಮಾಡಿದ ಮಹಾನ್ ಚೇತನ ಸರ್.ಎಂ.ವಿಶ್ವೇಶ್ವರಯ್ಯ!

ಕಡು ಬಡತನದಲ್ಲಿ ಬಾಲ್ಯ, ನಂತರ ಸ್ವಂತ ಶ್ರಮ ಹಾಗೂ ದುಡಿಮೆಯಿಂದ ಶಿಕ್ಷಣ ಹಾಗೂ ಉನ್ನತ ವ್ಯಾಸಂಗ ಮುಗಿಸಿ ಮೇಧಾವಿ ಇಂಜಿನಿಯರ್ ಎಂದೆನಿಸಿಕೊಂಡವರು. ಸಮಯ ಪ್ರಜ್ಞೆ ಹಾಗೂ ಶಿಸ್ತು ಪ್ರಮಾಣಿಕತೆಯಿಂದ ಘನ ವ್ಯಕ್ತಿತ್ವ ಪಡೆದು ಮೈಸೂರು ಸಂಸ್ಥಾನದ ದಿವಾನರಾಗಿ, ಕಾವೇರಿ ನದಿಗೆ ಕೃಷ್ಣರಾಜ ಸಾಗರದ ಅಣೆಕಟ್ಟು ಕಟ್ಟುವ ಯೋಜನೆ ರೂಪಿಸಿ ಕಾರ್ಯಗತ ಮಾಡಿಭಾರತ ರತ್ನರಾದವರು.

ಇಂಜಿನಿಯರ್ ಗಳ ದಿನಚರಣೆ : ಸೆ.15 ರಂದು ಜನಿಸಿದ ಮಹಾನ್ ಚೇತನದ ಹುಟ್ಟಿದ ದಿನವನ್ನು ಭಾರತದಲ್ಲಿಇಂಜಿನಿಯರ್ಗಳ ದಿನವಾಗಿ ಆಚರಿಸಲಾಗುತ್ತಿದೆ. ಇಂತಹ ಪುಣ್ಯ ದಿನದಂದು ಕೇವಲ ಹಣಕ್ಕಾಗಿ ಕರ್ತವ್ಯವೆಸಗುವವರು, ಕಟ್ಟುತ್ತಲೇ ಕುಸಿದು ಬೀಳುತ್ತಿರುವ ಕಾಮಗಾರಿಗಳ ಮೇಲ್ವಿಚಾರಕರಾಗಿರುವ ಇಂದಿನ ಕೆಲವು ಧನದಾಹಿ ಇಂಜಿನಿಯರ್ಗಳು ತಮ್ಮ ಕಾರ್ಯವಿಧಾನವನ್ನು ಪುನಃ ಪರಿಶೀಲಿಸಿಕೊಂಡು ಪ್ರಮಾಣಿಕವಾಗಿ ಚಿಂತಿಸಿದರೆ ಅದು ನೂರೊಂದು ವರುಷಧೀರ್ಘಯಿಷಿಯಾಗಿ ಜೀವಿಸಿದ ಸರ್.ಎಂ.ವಿ ರವರಿಗೆ ಸಲ್ಲಿಸುವ ನಿಜ ಗೌರವ ಶ್ರದ್ದಾಂಜಲಿಯಾಗಬಹುದು.

ಕಾವೇರಿಯನ್ನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ, ಕನ್ನಂಬಾಡಿಯ ಕಟ್ಟದಿದ್ದರೆ... ಬಂಗಾರ ಬೆಳೆವ ನಾಡು, ಆಗುತ್ತಿತ್ತೇ ಕಲೆಗಳ ಬೀಡು, ಕನ್ನಡ ಸಿರಿನಾಡು ನಮ್ಮ ಕನ್ನಡ ಸಿರಿನಾಡು...” ‘ಬಂಗಾರದ ಮನುಷ್ಯಚಿತ್ರದ ಗೀತೆಯ ಮೇಲಿನ ಸಾಲುಗಳೇ ಸಾಕು ಸರ್.ಎಂ.ವಿ ರವರ ವ್ಯಕ್ತಿತ್ವವನ್ನು ಸಮರ್ಥವಾಗಿ ಬಿಂಬಿಸುತ್ತದೆ. ನಾಡು ಕಂಡ ಮೇರು ವ್ಯಕ್ತಿತ್ವದ ತಂತ್ರಜ್ಞನಿಗೆ ಇಂಜಿನಿಯರ್ ದಿನಚರಣೆ ಆಚರಿಸುವ ಸಂದರ್ಭದಲ್ಲಿ ಸಣ್ಣ ನುಡಿ ನಮನ.

Thursday, September 13, 2012

 
‘ಅಣ್ಣಾವ್ರು’ ಯಾಕೆ ರಾಜಕೀಯಕ್ಕೆ ಬರಲಿಲ್ಲ . . !
 


(ರಾಜಕುಮಾರ್ ಹುಟ್ಟುಹಬ್ಬದಂದು ಪತ್ರಿಕೆ ಒಂದರಲ್ಲಿ ನಾನು ಬರೆದಿದ್ದ ಲೇಖನ)
 
ನಮ್ಮದೇ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದ ವೇದಿಕೆಯದು. ಖ್ಯಾತ ಸಾಹಿತಿ ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪನವರಿಗೆ ವೇದಿಕೆಯಲ್ಲಿದ್ದ ಸಾಹಿತಿ ಲೇಖಕರು ಬಹುಪಾಲು ಎಲ್ಲಾ ವಿಚಾರಗಳಿಗೆ ಸಂಬಂಧಿಸಿದ ಹಾಗೆ ಪ್ರಶ್ನೆಗಳನ್ನು ಕೇಳಿ ಮುಗಿಸಿದ್ದರು. ಕಿರಿಯನಾದ ನನಗೆ ಕೊನೆಗೆ ಸಿಕ್ಕ್ಕ ಅವಕಾಶದಲ್ಲಿ ಕೇಳಿದ ಸರಳ ಪ್ರಶ್ನೆನಿಮಗೆ ಇಷ್ಟವಾದ ಕನ್ನಡದ ನಟ ಹಾಗೂ ಚಲನಚಿತ್ರ ಯಾವುದುಎಂಬ ಪ್ರಶ್ನೆಗೆ ಅವರಿಂದ ದೊರೆತ ಉತ್ತರ ಡಾ||ರಾಜಕುಮಾರ್ ಹಾಗೂ ಬಂಗಾರದ ಮನುಷ್ಯ. ಮೇಲಿನ ಘಟನೆಯನ್ನು ಅವಲೋಕಿಸಿದಾಗ ಸಾಮಾನ್ಯವಾಗಿ ಮನದಟ್ಟಗುವ ಅಂಶವೆಂದರೆ ರಾಜ್ ಚಿತ್ರಗಳನ್ನು ನೋಡಿರಾದ ಮಕ್ಕಳು, ರಾಜ್ ಚಿತ್ರ ನೋಡುವ ಚಿತ್ರ ರಸಿಕರು ಹಾಗೂ ಸಾಮಾನ್ಯರಿಗಿಂತ ಭಿನ್ನವಾದ ಚಿಂತನೆ ಮಾಡುವ ಚಲನ ಚಿತ್ರ ಹಾಗೂ ನಟರಿಂದ ಪ್ರಭಾವಿತರಾಗದ ಸಾಹಿತಿ ಬುದ್ದಿ ಜೀವಿಗಳಿಗೂ ಡಾ||ರಾಜ್ ಪ್ರಿಯವೆನಿಸಲು ಕೇವಲ ರಾಜ್ ಚಿತ್ರ ಹಾಗೂ ನಟನೆಯೊಂದೆ ಕಾರಣವಲ್ಲದೇ ಮಹಾನ್ ನಟನ ವ್ಯಕ್ತಿತ್ವ ನಡೆ ನುಡಿಗಳೇ ಎನ್ನುವುದು ಹಗಲಿನಷ್ಠೆ ಸತ್ಯವೆನಿಸುತ್ತದೆ.



ಕನ್ನಡಾಭಿಮಾನ ಮತ್ತು ರಾಜ್ ವ್ಯಕ್ತಿತ್ವ : ಕರುನಾಡಿನ ಸಾಹಿತಿಗಳು ಎಂದರೆ ನಾಡಿಗೆ ವರ ಎಂದೆ ರಾಜ್ ಭಾವಿಸುತ್ತಿದ್ದರು. ರಾಜ್ ಜೀವಿತಾವಧಿಯಲ್ಲಿ ಸಾಹಿತಿಗಳೊಂದಿಗೆ, ಅತ್ಯಂತ ಮಧುರವಾದ ಸಂಬಂಧವನ್ನು ಹೊಂದಿದ್ದರು. ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ಬೆಸೆದುಕೊಂಡ ಸಾಹಿತಿಗಳು ಹಾಗೂ ರಾಜಣ್ಣರ ಸಂಬಂಧ ಅನುಬಂಧವಾಗಿ ಕಡೆಯವರೆಗೆ ಉಳಿದು ಬಿಟ್ಟಿತು. ಸಾಹಿತಿಗಳ ಬಗ್ಗೆ ಅಪಾರವಾದ ಗೌರವ ಹೊಂದಿದ್ದ ರಾಜ್ ಕನ್ನಡದ ಹಲವಾರು ಉತ್ತಮ ಕಥೆ ಕಾದಂಬರಿ ಆಧರಿತ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದರು. ಕನ್ನಡದ ಹಿರಿಯ ಹಾಗೂ ಹೆಸರಾಂತ ಕವಿಗಳ ಜನಪ್ರಿಯ ಶ್ರೇಷ್ಠ ಕವನಗಳನ್ನು ಮನ ತುಂಬಿ ಹಾಡಿದ್ದಾರೆ. ಹೀಗೆ ಚಿತ್ರ ಕಲಾವಿದರಾಗಿ ತಮಗೆ ಪ್ರಿಯವಾದ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಮಿತಿಯಲ್ಲಿ ಅಪಾರ ಸೇವೆ ಸಲ್ಲಿಸಿಕೊಂಡು ಬಂದಿದ್ದರು.

ಕನ್ನಡ ಭಾಷಾ ಇತಿಹಾಸದಲ್ಲಿ ಡಾ||ರಾಜಕುಮಾರ್ ಭಾಷೆಯೊಂದಿಗೆ ಗುರ್ತಿಸಿಕೊಂಡು ಜನಪ್ರಿಯವಾದಷ್ಟು ಮೇರು ವ್ಯಕ್ತಿತ್ವ ಮತ್ತೊಂದಿಲ್ಲ. ಕನ್ನಡರಾಜೋತ್ಸವಾದ ಸಮಾರಂಭಗಳಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಚಿತ್ರ ಪಟ ಎಷ್ಟು ಅನಿವಾರ್ಯವೋ ಅಷ್ಠೇ ಅನಿವಾರ್ಯ ರಾಜ್ರವರ ಪೋಟೋ. ಇದು ಉತ್ಪ್ರೇಕ್ಷೆಯಲ್ಲ ವಾಸ್ತವ. ರಾಜ್ ನಟರೆಂಬ ವ್ಯಕ್ತಿತ್ವವನ್ನು ಮೀರಿ ಇಷ್ಟವಾಗುವ ವ್ಯಕ್ತಿತ್ವ ಪಡೆದುಕೊಂಡಿದ್ದು ಅವರ ಪ್ರಮುಖ ಸಾಧನೆಗಳಲ್ಲಿ ಒಂದು.

ರಾಜ್ ಮತ್ತು ರಾಜಕೀಯ : ಅಭಿನಯದಲ್ಲಿ, ಜನಪ್ರಿಯತೆಯಲ್ಲಿ ರಾಜಕುಮಾರ್ ಅವರಷ್ಟೇ ಅಥವಾ ಅವರಿಗಿಂತಲು ಒಂದು ಸುತ್ತು ಮಿಗಿಲಾದ ನಟರನ್ನು ಭಾರತ ಕಂಡಿದೆ. ನೆರೆಯ ರಾಜ್ಯಗಳ ನಟರಾದ ಎನ್.ಟಿ.ರಾಮರಾವ್, ಎಂ.ಜಿ.ರಾಮಚಂದ್ರನ್, ಮತ್ತು ಅಮಿತಾಬ್ ಬಚ್ಚನ್ ಉದಾಹರಣೆಗಳು ಪ್ರಸ್ತುತ. ಆದರೆ ಸೌಜನ್ಯದಲ್ಲಿ? ತನ್ನ ಸಾಮಥ್ರ್ಯಗಳ ಅರಿವಿನಲ್ಲಿ? ವಿಚಾರದಲ್ಲಿ ರಾಜಕುಮಾರ್ ಎಲ್ಲರಿಗಿಂತಲೂ ಬೇರೆಯಾಗಿ ನಿಲ್ಲುತ್ತಾರೆ. ಅವರಿಗೆ ಅವರೇ ಸಾಟಿ. ಮೇಲಿನ ನಟರು ತಮ್ಮ ಜನಪ್ರಿಯತೆಯನ್ನು ರಾಜಕೀಯ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಉಪಯೋಗಿಸಿಕೊಂಡರು. ಕರ್ನಾಟಕದ ಮಟ್ಟಿಗೆ ಎಂ.ಜಿ.ಆರ್. ಮತ್ತು ಎನ್.ಟಿ.ಆರ್. ರಂತೆ ಜನಪ್ರಿಯರಾದ ರಾಜ್ ಏಕೆ ರಾಜಕೀಯಕ್ಕೆ ಇಳಿಯಲ್ಲಿಲ್ಲ ಎಂಬ ಪ್ರಶ್ನೆ ಹಲವರಿಗೆ ಇಂದಿಗೂ ಕಾಡಿದ್ದಿದೆ. ಸರಳ ಪ್ರಶ್ನೆಗೆ ಉತ್ತರ ಅವರಿಗೆ ಇಷ್ಟವಿರಲ್ಲಿಲ್ಲವೇನೋ ಎಂದು ಹೇಳಿಕೊಂಡು ಬಿಡಬಹುದು. ಆದರೆ ತೆರೆಯ ಮೇಲೆ ಅದ್ಭುತ ನಟರಾದ ರಾಜ್ಗೆ ನಿಜ ಜೀವನದಲ್ಲಿ ಅಷ್ಟೇ ಅದ್ಭುತವಾಗಿ ನಮ್ಮ ರಾಜಕರಣೀಗಳಂತೆ ನಟಿಸುವುದು ತಿಳಿದಿರಲಿಲ್ಲ. ರಾಜಕೀಯ ನಾಯಕನಾಗಲೂ ಕೇವಲ ಒಳ್ಳೆಯ ಮನುಷ್ಯನಾಗಿರದೇ ಧಾರಳವಾಗಿ ಆಶ್ವಾಸನೆ ಕೊಡುವ, ಅವುಗಳನ್ನು ಪೂರೈಸದಿದ್ದರೆ. ಯಾಕೆ ಹೀಗಾಯಿತು ಎಂದು ನಂಬಿಸುವ, ಹಿಂಬಾಲಕರನ್ನು ನಿಯಂತ್ರಿಸುವ, ವಿರೋಧಿಗಳನ್ನು ದಿಕ್ಕು ತಪ್ಪಿಸುವ ಕುಟಿಲ ನೀತಿ, ಇಂತಹ ಯಾವುದೇ ಗುಣಗಳು ತಮ್ಮಲ್ಲಿ ಇರದೇ ಇರುವ ಅರಿವಿದ್ದ ರಾಜ್ ರಾಜಕೀಯಕ್ಕೆ ಬರಲಿಲ್ಲ. ಇದರಿಂದಾಗಿಯೇ ಅಷ್ಟೇನು ವಿದ್ಯಾವಂತರಲ್ಲದ ಮುಗ್ಧ ಕಲಾವಿದಮುತ್ತುರಾಜ್ ಕರ್ನಾಟಕದರತ್ನರಾಗಿದ್ದು.
ಅಂದ ಹಾಗೆ ಇಂದು ಏಪ್ರಿಲ್ 24, ಎರಡು ಕಾರಣಗಳಿಂದ ಇಂದು ಮಹತ್ವ ದಿನ. ಒಂದು ಕನ್ನಡ ನಾಡು ಕಂಡ ಅದ್ಭುತ ಪ್ರತಿಭೆ ವರನಟ ಡಾ||ರಾಜಕುಮಾರ್ ರವರ ಜನ್ಮ ದಿನ, ಎರಡು ಜಗತ್ತು ಕಂಡ ಅದ್ಭುತ ಕ್ರಿಕೆಟ್ ಪ್ರತಿಭೆ ಸಚಿನ್ ತೆಂಡುಲ್ಕರ್ ಜನ್ಮದಿನ ಅಪ್ರತಿಮ ವ್ಯಕ್ತಿತ್ವ ಇರುವ ಇಬ್ಬರು ಸರ್ವಕಾಲಕ್ಕೂ ಶ್ರೇಷ್ಠರು! ಇಂತಹವರು ಯುಗಕೊಬ್ಬರು. ಕನ್ನಡಿಗರ ಹೃದಯದಲ್ಲಿ ಚಿರಂಜೀವಿಯಾಗಿರುವ ರಾಜ್ ಹಾಗೂ ಸಮಸ್ತ ಭಾರತೀಯರ ಅಚ್ಚುಮೆಚ್ಚಿನ ಕ್ರಿಕೆಟ್ಪಟು ಸಚಿನ್ ಇಬ್ಬರಿಗೂ ಹುಟ್ಟುಹಬ್ಬದ ಶುಭಾಶಯಗಳು.