Monday, September 17, 2012

 
ವಿಶ್ವೇಶ್ವರಯ್ಯ  ಶ್ರಮ  ಪಡದಿದ್ದರೆ ...!!
(ಮೇರು ವ್ಯಕ್ತಿತ್ವದ ತಂತ್ರಜ್ಞನಿಗೆ ಇಂಜಿನಿಯರ್ ದಿನಚರಣೆ (ಸೆ.೧೫) ಆಚರಿಸುವ ಈ ಸಂದರ್ಭದಲ್ಲಿ ಸಣ್ಣ ನುಡಿ ನಮನ)

ಹಲವು ದಶಕಗಳ ಹಿಂದಿನ ಮಾತು, ಭಾರತೀಯ ಎಂಜಿನಿಯರ್ಗಳ ತಂಡವೊಂದು ಅಮೇರಿಕಾದ ಕಾರ್ಖಾನೆಗಳ ಅಧ್ಯಯನ ಪ್ರವಾಸದಲ್ಲಿತ್ತು. ತಂಡದ ಸದಸ್ಯರು ಬೃಹತ್ ಕಾರ್ಖಾನೆಯೊಂದರ ನೆಲ ಮಾಳಿಗೆಯ ಬಳಿಯ 50-60 ಅಡಿ ಎತ್ತರದ ಏಣಿಯೊಂದರ ಬಳಿ ನಿಂತಿದ್ದರು. ತಂಡಕ್ಕೆ ಅಮೇರಿಕನ್ ಇಂಜಿನಿಯರ್ ಒರ್ವ ಕಾರ್ಖಾನೆಯ ಉತ್ಪಾದನಾ ಸಾರ್ಮಥ್ಯ ಹಾಗೂ ಯಂತ್ರಗಳ ಬಗ್ಗೆ ಮಾಹಿತಿ ನೀಡಿ ಬೃಹತ್ ಯಂತ್ರಗಳು ಕಾರ್ಯನಿರ್ವಹಿಸುವ ವಿಧಾನ ತಿಳಿಯುವ ಆಸಕ್ತಿ ಇದ್ದರೆ ಹತ್ತಿರದಲ್ಲೇ ಇರುವ ದೊಡ್ಡ ಏಣಿಯನ್ನು ಹತ್ತಿ ಮೇಲಿನಿಂದ ವೀಕ್ಷಿಸಬಹುದು ಎಂಬ ಸಲಹೆಯನ್ನು ಕೊಟ್ಟನು. ಕೂಡಲೇ ಭಾರತೀಯ ತಂಡದಲ್ಲಿದ ಹಿರಿಯ ವಯೋವೃದ್ದ ಇಂಜಿನಿಯರ್ ಒಬ್ಬರು ತಡಮಾಡದೇ ಮುಂದೆ ಬಂದು ಏಣಿಯನ್ನು ಒಂದೇ ಉಸಿರಿನಲ್ಲಿ ವಿಶ್ರಮಿಸದೇ ಹತ್ತಿ ಯಂತ್ರಗಳನ್ನು ವೀಕ್ಷಿಸಿ ಪೂರ್ಣ ತಪಾಸಣೆ ಮುಗಿಸಿ ಅಲ್ಲೇ ನಿಂತರು. ತಂಡದ ಇನ್ನುಳಿದ ಕೆಲವು ಸದಸ್ಯರು ಆಶ್ಚರ್ಯಚಕಿತರಾಗಿ ಕೆಳಗೆ ನಿಂತು ನೋಡುತ್ತಿದ್ದರು, ಇನ್ನೂ ಕೆಲವರು ಏಣಿಯನ್ನು ಅರ್ಧಕ್ಕೆ ಹತ್ತಿ ವಿಫಲರಾಗಿ ನಿಂತಿದ್ದರು, ಯುವಕರಾಧಿಯಾಗಿ ತಂಡದ ಎಲ್ಲಾ ಸದಸ್ಯರು ಏಣಿಯನ್ನು ಹತ್ತಲು ವಿಫಲರಾದರೂ, ಹಿರಿಯ ಜೀವವೊಂದು ಯಶಸ್ವಿಯಾಗಿತ್ತು. ವ್ಯಕ್ತಿಯ ರೀತಿಯೇ ಹಾಗೇ ತಾನು ಏನನ್ನು ಮಾಡಿದರು ಅದನ್ನ ವ್ಯವಸ್ಥಿತವಾಗಿ ಅಂದುಕೊಂಡಂತೆ ಮಾಡಿ ತೀರುವ ಮೇಧಾವಿ!

ಮೈಸೂರು ಮಹಾರಾಜರ ಕಾಲವದು, ಸಾಂಪ್ರದಾಯದಂತೆ ಪ್ರತಿ ವರ್ಷ ದಸರಾ ಪ್ರಯುಕ್ತ ಮೈಸೂರು ಮಹಾರಾಜರ ಅರಮನೆಯ ಆಸ್ಥಾನದಲ್ಲಿ ದರ್ಬಾರು ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಬರುತ್ತಿದ್ದ ವಿದೇಶಿ ಅತಿಥಿಗಳಿಗೆ ಆಸ್ಥಾನದಲ್ಲಿ ಕುಳಿತು ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸಲು ವಿಶೇಷ ವೈಭೋವೋಪೇತ ಅಸನಗಳ ವ್ಯವಸ್ಥೆ ಮಾಡಲಾಗುತ್ತಿತ್ತು, ಹಾಗೇ ಉಳಿದ ಭಾರತೀಯ ಗಣ್ಯರು ನೆಲದ ಮೇಲೆ ಕುಳಿತು ಕಾರ್ಯಕ್ರಮದಲ್ಲಿ ಪಾಲ್ಗೊಳಬೇಕಾಗಿತ್ತು. ಮೊದಲ ಬಾರಿ ಆಸ್ಥಾನದ ದಿವಾನರಾಗಿ ನೇಮಕಗೊಂಡಿದ್ದ ದಿವಾನರೊಬ್ಬರು ದರ್ಬಾರು ಕಾರ್ಯಕ್ರಮದ ಅಸನದ ವ್ಯವಸ್ಥೆಯ ತಾರತಮ್ಯವನ್ನು ಗ್ರಹಿಸಿ ಅಸಮಾಧಾನಗೊಂಡು ಮುಂದಿನ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲೇ ಇಲ.್ಲ ಮಹಾರಾಜರು ಇವರ ಅನುಪಸ್ಥಿತಿಯ ಬಗ್ಗೆ ವಿಚಾರಿಸಲು ಯಾವುದೇ ಅಂಜಿಕೆ ಇಲ್ಲದೆ ಕಾರಣವನ್ನು ತಿಳಿಸಿದ ದಿಟ್ಟ ಆಡಳಿತಗಾರ! ಇದರ ಫಲವಾಗಿ ಮುಂದಿನ ವರ್ಷಗಳಲ್ಲಿ ಎಲ್ಲರಿಗೂ ಸಮಾನ ಅಸನ ವ್ಯವಸ್ಥೆಯಾಯಿತು.

ಮುಂದೊಂದು ದಿನ ಬ್ರಿಟೀಷ್ ಅಧಿಕಾರಿಯೊಬ್ಬ ಇದೇ ದಿವಾನರಿಗೆ ಪತ್ರ ಬರೆದು ನಿಮ್ಮ ದರ್ಬಾರಿನಲ್ಲಿರುವ ಅಸನಗಳು ಅತೀ ಎತ್ತರದಾಗಿದ್ದು, ಅದರ ಮೇಲೆ ಕೂತಾಗ ಪಾದಗಳು ನೆಲಕ್ಕೆ ತಾಕುವಂತಿರುವುದರಿಂದ ಪಾದಗಳನ್ನು ಇಡಲು ಮೆತ್ತನೆ ಹಾಸೊಂದನ್ನು ಒದಗಿಸಬೇಕೆಂದು ಬೇಡಿಕೆ ಇಟ್ಟನು. ಮೇಧಾವಿ ದಿವಾನರು ಅಸನದ ಕಾಲುಗಳನ್ನು ಕತ್ತರಿಸಿ ಅಸನದ ಎತ್ತರವನ್ನು ತುಂಡವಾಗಿಸಿ ಬ್ರಿಟೀಷ್ ಅಧಿಕಾರಿಗೆ ಪತ್ರ ಬರೆದುಅಸನ ಸರಿಪಡಿಸಲಾಗಿದೆಎಂದರು. ಅಂತಹ ನಿರ್ಭೀತ ದೇಶ ಭಕ್ತರಾಗಿದ್ದರು ದಿವಾನರು!

ಅಂದ ಹಾಗೇ ಮೇಲಿನ ಸ್ವಾರಸ್ಯಕರ ಘಟನೆಗಳಲ್ಲಿ ಪ್ರಸ್ತಾಪ ಮಾಡಿರುವ ಮೇಧಾವಿ ವೃದ್ದ ಇಂಜಿನಿಯರ್, ದಕ್ಷ ಆಡಳಿತಗಾರ ದಿವಾನರು ಬೇರೆ ಯಾರು ಅಲ್ಲ, ಅವರೇ ನಮ್ಮ ಭವ್ಯ ಭಾರತದ ದಿವ್ಯ ಕೀರ್ತಿ ಪತಾಕೆಯನ್ನು ಜಗತ್ತಿನಲ್ಲೆಡೇ ಮೇಲ್ಮಟದಲ್ಲಿ ಹಾರುವಂತೆ ಮಾಡಿದ ಮಹಾನ್ ಚೇತನ ಸರ್.ಎಂ.ವಿಶ್ವೇಶ್ವರಯ್ಯ!

ಕಡು ಬಡತನದಲ್ಲಿ ಬಾಲ್ಯ, ನಂತರ ಸ್ವಂತ ಶ್ರಮ ಹಾಗೂ ದುಡಿಮೆಯಿಂದ ಶಿಕ್ಷಣ ಹಾಗೂ ಉನ್ನತ ವ್ಯಾಸಂಗ ಮುಗಿಸಿ ಮೇಧಾವಿ ಇಂಜಿನಿಯರ್ ಎಂದೆನಿಸಿಕೊಂಡವರು. ಸಮಯ ಪ್ರಜ್ಞೆ ಹಾಗೂ ಶಿಸ್ತು ಪ್ರಮಾಣಿಕತೆಯಿಂದ ಘನ ವ್ಯಕ್ತಿತ್ವ ಪಡೆದು ಮೈಸೂರು ಸಂಸ್ಥಾನದ ದಿವಾನರಾಗಿ, ಕಾವೇರಿ ನದಿಗೆ ಕೃಷ್ಣರಾಜ ಸಾಗರದ ಅಣೆಕಟ್ಟು ಕಟ್ಟುವ ಯೋಜನೆ ರೂಪಿಸಿ ಕಾರ್ಯಗತ ಮಾಡಿಭಾರತ ರತ್ನರಾದವರು.

ಇಂಜಿನಿಯರ್ ಗಳ ದಿನಚರಣೆ : ಸೆ.15 ರಂದು ಜನಿಸಿದ ಮಹಾನ್ ಚೇತನದ ಹುಟ್ಟಿದ ದಿನವನ್ನು ಭಾರತದಲ್ಲಿಇಂಜಿನಿಯರ್ಗಳ ದಿನವಾಗಿ ಆಚರಿಸಲಾಗುತ್ತಿದೆ. ಇಂತಹ ಪುಣ್ಯ ದಿನದಂದು ಕೇವಲ ಹಣಕ್ಕಾಗಿ ಕರ್ತವ್ಯವೆಸಗುವವರು, ಕಟ್ಟುತ್ತಲೇ ಕುಸಿದು ಬೀಳುತ್ತಿರುವ ಕಾಮಗಾರಿಗಳ ಮೇಲ್ವಿಚಾರಕರಾಗಿರುವ ಇಂದಿನ ಕೆಲವು ಧನದಾಹಿ ಇಂಜಿನಿಯರ್ಗಳು ತಮ್ಮ ಕಾರ್ಯವಿಧಾನವನ್ನು ಪುನಃ ಪರಿಶೀಲಿಸಿಕೊಂಡು ಪ್ರಮಾಣಿಕವಾಗಿ ಚಿಂತಿಸಿದರೆ ಅದು ನೂರೊಂದು ವರುಷಧೀರ್ಘಯಿಷಿಯಾಗಿ ಜೀವಿಸಿದ ಸರ್.ಎಂ.ವಿ ರವರಿಗೆ ಸಲ್ಲಿಸುವ ನಿಜ ಗೌರವ ಶ್ರದ್ದಾಂಜಲಿಯಾಗಬಹುದು.

ಕಾವೇರಿಯನ್ನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ, ಕನ್ನಂಬಾಡಿಯ ಕಟ್ಟದಿದ್ದರೆ... ಬಂಗಾರ ಬೆಳೆವ ನಾಡು, ಆಗುತ್ತಿತ್ತೇ ಕಲೆಗಳ ಬೀಡು, ಕನ್ನಡ ಸಿರಿನಾಡು ನಮ್ಮ ಕನ್ನಡ ಸಿರಿನಾಡು...” ‘ಬಂಗಾರದ ಮನುಷ್ಯಚಿತ್ರದ ಗೀತೆಯ ಮೇಲಿನ ಸಾಲುಗಳೇ ಸಾಕು ಸರ್.ಎಂ.ವಿ ರವರ ವ್ಯಕ್ತಿತ್ವವನ್ನು ಸಮರ್ಥವಾಗಿ ಬಿಂಬಿಸುತ್ತದೆ. ನಾಡು ಕಂಡ ಮೇರು ವ್ಯಕ್ತಿತ್ವದ ತಂತ್ರಜ್ಞನಿಗೆ ಇಂಜಿನಿಯರ್ ದಿನಚರಣೆ ಆಚರಿಸುವ ಸಂದರ್ಭದಲ್ಲಿ ಸಣ್ಣ ನುಡಿ ನಮನ.

1 comment:

  1. ಸುಂದರವಾದ ಲೇಖನ...ಅಂತಹ ಮಹನೀಯರನ್ನು ನೆನದರೆ ನಮ್ಮ ಬದುಕು ಸಾರ್ಥಕವೆನಿಸುತ್ತದೆ..ಅಭಿನಂದನೆಗಳು ನಿಮಗೆ

    ReplyDelete